ಬೆಂಗಳೂರು, ಡಿ.೮: ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಕುರಿತು ಸಮಗ್ರ ವರದಿ ನೀಡಿದ್ದರೂ, ಸರಕಾರ ಕ್ರಮ ಕೈಗೊಳ್ಳದೆ ಮತ್ತೊಂದು ವರದಿ ಕೇಳುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ನಗರದ ಖಾಸಗಿ ಹೊಟೇಲ್ನಲ್ಲಿ ‘ಟಾಟಾ ಟೀ’ ಕಂಪೆನಿಯ ಭ್ರಷ್ಟಾಚಾರ ವಿರೋಧಿ ಜಾಗೃತಿ ಆಂದೋಲನಕ್ಕೆ ಚಾಲನೆ ನೀಡಿದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತ ಇಲಾಖೆ ನೀಡಿದ ವರದಿಯನ್ನೇ ಸರಕಾರ ಸರಿಯಾಗಿ ಅಧ್ಯಯನ ಮಾಡಿಲ್ಲ ಎಂದು ದೂರಿದರು.
ಬಳ್ಳಾರಿಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಕುರಿತು ಸಿಬಿಐ ತನಿಖೆ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಂತೋಷ ಹೆಗ್ಡೆ, ಈಗಾಗಲೇ ಲೋಕಾಯುಕ್ತ ವರದಿ ನೀಡಿದ್ದರೂ, ಮತ್ತೊಂದು ತನಿಖೆಯ ಅಗತ್ಯವಿಲ್ಲ. ಆದರೆ, ಸಿಬಿಐ ತನಿಖೆಗೆ ತಮ್ಮದೇನು ಆಕ್ಷೇಪವಿಲ್ಲ ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಭಾರತ ದೇಶಕ್ಕೆ ಸ್ವಾತಂತ್ರ ಬಂದು ಆರು ದಶಕಗಳು ಕಳೆದರೂ ಭ್ರಷ್ಟಾಚಾರದ ಕುರಿತು ಜಾಗೃತಿ ಮೂಡಿಸಲು ಉದ್ಯಮಿಗಳು ಮುಂದೆ ಬಂದಿಲ್ಲ. ಆದರೆ, ಟಾಟಾ ಟೀ ಕಂಪೆನಿ ಈ ಬಗ್ಗೆ ಜಾಗೃತಿ ಆಂದೋಲನ ಕೈಗೊಂಡಿರುವುದು ಶ್ಲಾಘನೀಯ ಎಂದು ಬಣ್ಣಿಸಿದ ಸಂತೋಷ ಹೆಗ್ಡೆ, ಭವಿಷ್ಯದ ಹಿತದೃಷ್ಟಿಯಿಂದ ಯುವಜನರಲ್ಲಿ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಯಾವುದೇ ಒಂದು ಸಂಸ್ಥೆಯಿಂದ ಮಾತ್ರ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸಾರ್ವಜನಿಕರು, ಮುಖ್ಯವಾಗಿ ಯುವ ಜನಾಂಗ ಜಾಗೃತಗೊಳ್ಳಬೇಕಾದ ಅಗತ್ಯವಿದೆ ಎಂದು ಸಂತೋಷ ಹೆಗ್ಡೆ ಹೇಳಿದರು. ಈ ಸಂದರ್ಭದಲ್ಲಿ ಟಾಟಾ ಟೀ ಕಂಪೆನಿಯ ನಿರ್ದೇಶಕಿ ಸಂUತಾ ತಲ್ವಾರ್ ಉಪಸ್ಥಿತರಿದ್ದರು